ರಂಜಾನ್
ಮುಸ್ಲಿಮರ ಒಂದು ಹಬ್ಬ.  ಹಿಜರಿ ಶಕೆಯಲ್ಲಿ ಬರುವ ಒಂಬತ್ತನೆಯ ತಿಂಗಳಾದ ರಂಜಾನ್ ತಿಂಗಳು ಮುಗಿದು ಮಾರನೆಯ ದಿವಸ ಬರುವ ಈ ಹಬ್ಬ ಆ ತಿಂಗಳ ಹೆಸರಿನಲ್ಲಿಯೇ ಪ್ರಸಿದ್ಧಿಯಾಗಿದೆ. ಈ ಹಬ್ಬವನ್ನು ಈದುಲ್- ಫಿತರ್ ಅಥವಾ ಉಪವಾಸವನ್ನು ಕೊನೆಗಾಣಿಸುವ ಹಬ್ಬ ಎಂದೂ ಕರೆಯುತ್ತಾರೆ. ಇದು ಇಸ್ಲಾಮ್ ಪೂರ್ವದ್ದಲ್ಲ. ಮುಹಮ್ಮದ್ ಪೈಗಂಬರ್ ಆರಂಭಿಸಿದ್ದು. ಹಿಂದೂಗಳ ದೀಪಾವಳಿ ಹಬ್ಬದಂತೆ ಮುಸ್ಲಿಮರಿಗೆ ರಂಜಾನ್ ಸಂತೋಷದ ದೊಡ್ಡ ಹಬ್ಬ. ಎಲ್ಲ ಪಂಗಡದ ಮುಸ್ಲಿಮರೂ ಇದನ್ನು ಆಚರಿಸುತ್ತಾರೆ.
ಇಸ್ಲಾಮ್ ಧರ್ಮದ (ನೋಡಿ- ಇಸ್ಲಾಂ) ಐದು ಮೂಲಭೂತ ತತ್ತ್ವಗಳಲ್ಲಿ ರಂಜಾನ್ ತಿಂಗಳ ರೋಜಾó ಅಥವಾ ಉಪವಾಸ ವ್ರತವೂ ಒಂದು. ಮುಸ್ಲಿಮರು ಈ ತಿಂಗಳ ಮೂವತ್ತು ದಿವಸಗಳಲ್ಲಿ ಪ್ರಾತಃಕಾಲದಿಂದ ಸೂಯಾಸ್ತದ ತನಕ ನಿಯತ್ತಿನೊಡನೆ (ಮಂತ್ರದೊಡನೆ) ಆಹಾರ ಪಾನೀಯಗಳನ್ನು ತ್ಯಜಿಸಿ ಉಪವಾಸ ಆಚರಿಸುತ್ತಾರೆ. ಅಂಥವರು ಕಾಮಲಾಲಸೆಗಳಿಂದ ಮುಕ್ತರಾಗಿರುವುದಕ್ಕೆ ರೋಜಾó ಎನ್ನುವರು. ಈ ವ್ರತವನ್ನು ದಿವಸದ 14 ಗಂಟೆಗಳ ಕಾಲ ಆಚರಿಸುವರು. ಈ ಅವಧಿಯಲ್ಲಿ ಆಹಾರವೇ ಅಲ್ಲ ಒಂದು ತೊಟ್ಟು ನೀರು ಸಹ ಹೊಟ್ಟೆಯೊಳಗೆ ಸೇರಬಾರದು. ಜೊಲ್ಲು ನುಂಗುವುದು ಸಹ ಧರ್ಮಬಾಹಿರ.

ಉಪವಾಸ ಪ್ರಾಶಸ್ತ್ಯ ಕುರಾನಿನಲ್ಲಿ ಹೀಗೆ ನಿರೂಪಣೆಗೊಂಡಿದೆ: ಮಾನವ ಕುಲದ ಮಾರ್ಗದರ್ಶಿಯೂ ತಪ್ಪು ಒಪ್ಪುಗಳ ಮಾನದಂಡವೂ ಆದ ಕುರಾನ್ ಪ್ರಕಾಶನಗೊಂಡ ತಿಂಗಳು ರಂಜಾನ್. ನಿಮ್ಮಲ್ಲಿ ಹಾಜರಿರತಕ್ಕವರೆಲ್ಲ ಈ ತಿಂಗಳು ಉಪವಾಸ ಆಚರಿಸಿ ಮತ್ತು ನಿಮ್ಮಲ್ಲಿ ಅನಾರೋಗ್ಯದಿಂದಿರುವವರು ಮತ್ತು ಪ್ರಯಾಣದಲ್ಲಿರುವವರು ಅಷ್ಟೇ ಸಂಖ್ಯೆ ಇತರ ದಿನಗಳಲ್ಲಿ ಉಪವಾಸ ಆಚರಿಸಲಿ/ ಅಲ್ಲಾಹ್ ನಿಮಗೆ ಸುಖ ಬಯಸುತ್ತಾನೆ. ಕಷ್ಟ ಕೊಡುವುದಿಲ್ಲ.

ಈ ವ್ರತ ಎಲ್ಲ ಮುಸ್ಲಿಮರಿಗೂ (ಪುರುಷ, ಸ್ತ್ರೀ, ಬಡವ, ಶ್ರೀಮಂತ) ಕಡ್ಡಾಯವಾದುದು. ರೋಗಿಗಳು, ಕುರುಡರು, ಇತರ ಅಂಗವಿಕಲರು, ಗುಲಾಮರು, ಯಾತ್ರಿಕರು, ಚಿಕ್ಕಮಕ್ಕಳು, ಗರ್ಭಿಣಿ ಅಥವಾ ಬಾಣಂತಿಯರು ಈ ವ್ರತ ಆಚರಿಸುವುದು ಅನಿವಾರ್ಯವಲ್ಲ.  ಅದರ ರೋಗಿಗಳು ತಮ್ಮ ರೋಗ ವಾಸಿಯಾದ ಮೇಲೆ ಮತ್ತು ಯಾತ್ರಿಕರು ತಮ್ಮ ಯಾತ್ರೆ ಮುಗಿದ ತರುವಾಯ ಒಂದು ತಿಂಗಳು ಈ ವ್ರತ ಆಚರಿಸಬೇಕು. ಇದರಿಂದ ಶ್ರೀಮಂತರು ಹಸಿವು, ಆವಶ್ಯಕತೆಗಳ ವೈಯಕ್ತಿಕ ಅನುಭವ ಪಡೆಯುತ್ತಾರೆ. ರಂಜಾನಿನ ಅವಧಿಯಲ್ಲಿ ಬಡವರು ಶ್ರೀಮಂತರು ಸಮಾನಸ್ಕಂಧರಾಗಿರುವುದರಿಂದ ಅವರನ್ನು ಅಲಕ್ಷಿಸುವಂತಿಲ್ಲ. ಆಧ್ಯಾತ್ಮಿಕ ಲಾಭಗಳ ಜೊತೆಗೆ ಉಪವಾಸದಿಂದ ದೇಹಾರೋಗ್ಯ ವೃದ್ಧಿಸುತ್ತದೆ. ಉಪವಾಸ ಆಂತರಿಕ ವ್ಯಾದಿಗಳಿಗೆ ಏಕೈಕ ಚಿಕಿತ್ಸೆ. ಉಗುಳು ನುಂಗುವುದು, ಬೀಡಿ ಸಿಗರೇಟು ಸೇದುವುದು, ಕಳ್ಳತನ ಮಾಡುವುದು, ಸುಳ್ಳು ಹೇಳುವುದು, ಬಯ್ಯುವುದು, ಇತ್ಯಾದಿ ಕೆಲಸಗಳಿಂದ ವ್ರತಭಂಗವಾಗುತ್ತದೆ.
ನಿಜವಾದ ರೋಜಾó ಬಗ್ಗೆ ಮುಹಮ್ಮದ್ ಪೈಗಂಬರ್ ಹೀಗೆ ಹೇಳಿದ್ದಾನೆ: ರೋಜಾ ಆಚರಿಸುವವರು ಅಸತ್ಯವನ್ನು ತ್ಯಜಿಸದಿದ್ದರೆ ಆಹಾರ ತೆಗೆದುಕೊಳ್ಳುವುದನ್ನು ನಿಲ್ಲಿಸಿದರೂ ದೇವರ ದೃಷ್ಟಿಯಲ್ಲಿ ಅದಕ್ಕೆ ಏನೂ ಬೆಲೆಯಿಲ್ಲ. ಈ ರೀತಿ ಉಪವಾಸ ವ್ರತ ಆಚರಿಸಿದವರಿಗೆ ಹಸಿವು ಮತ್ತು ಬಾಯಾರಿಕೆ ಬಿಟ್ಟು ಇನ್ನೇನು ಸಿಗುವುದಿಲ್ಲ. ಮಧ್ಯರಾತ್ರಿ ಎದ್ದು ನಮಾಜ್ ಅಥವಾ ದೇವರ ಪ್ರಾರ್ಥನೆ ಮಾಡುವವರಲ್ಲಿ ಅನೇಕರಿಗೆ ನಿದ್ದೆಗೆಟ್ಟಿದಷ್ಟೇ ಹೊರತು ಇನ್ನಾವ ಲಾಭವೂ ಆಗುವುದಿಲ್ಲ.

ಶ್ರದ್ಧಾಳುಗಳಾದ ಅನೇಕ ಮುಸ್ಲಿಮರು ದಿನವಿಡೀ ಮಸೀದಿಯಲ್ಲಿ ಇದ್ದುಕೊಂಡೇ ಈ ವ್ರತವನ್ನು ಆಚರಿಸುತ್ತಾರೆ ಹಾಗೂ ಕುರಾನ್ ಪಾರಾಯಣದಲ್ಲೂ ದೇವರ ಪ್ರಾರ್ಥನೆಯಲ್ಲೂ ಮಗ್ನರಾಗಿರುತ್ತಾರೆ. ಮುಸ್ಲಿಮರು ಪವಿತ್ರ ಗ್ರಂಥ ಕುರಾನ್ ಈ ರಂಜಾನ್ ತಿಂಗಳಲ್ಲಿ ಮೊದಲುಗೊಂಡದ್ದು. ಒಂದೇ ತಿಂಗಳ 26 ನೆಯ ದಿವಸ ರಾತ್ರಿಯೇ ಪರಿಪೂರ್ಣವಾಯಿತು (ನೋಡಿ- ಕುರಾನು). ಈ ರಾತ್ರಿಯನ್ನು ಲೈಲತ್ ಉಲ್‍ಖದರ್ ಅಥವಾ ಶಕ್ತಿಯ ರಾತ್ರಿ ಎಂದು ಕರೆಯುತ್ತಾರೆ. ಹಿಂದೂಗಳು ಶಿವರಾತ್ರಿಯ ದಿನ ಇಡೀ ರಾತ್ರಿ ಜಾಗರಣೆಯೊಡನೆ ಶಿವನ ಪೂಜೆಯಲ್ಲಿ ಸಮಯವನ್ನು ಕಳೆಯುವಂತೆ ಮುಸ್ಲಿಮರು ಇಡೀ ರಾತ್ರಿ ಜಾಗರಣೆ ಹಾಗೂ ದೇವರ ಧ್ಯಾನದಲ್ಲಿ ಕಳೆಯುತ್ತಾರೆ.

ರಂಜಾನ್ ದಿನಗಳಲ್ಲಿ ನರಕದ ಕದ ಮುಚ್ಚಿದ್ದು ಸ್ವರ್ಗದ ಕದ ತೆರೆದಿರುತ್ತದೆ. ಸೈತಾನನ (ದೆವ್ವದ) ಕಾಲಿಗೆ ಬೇರೆ ಬಿದ್ದಿರುತ್ತದೆ ಎಂದು ಮುಸ್ಲಿಮರ ನಂಬಿಕೆ. ಈ ತಿಂಗಳಿನಲ್ಲಿ ಉಪವಾಸ ವ್ರತವನ್ನು ಆಚರಿಸಿದರೆ ಎಲ್ಲರ ತಪ್ಪುಗಳನ್ನೂ ದೇವರು ಕ್ಷಮಿಸುತ್ತಾನೆಂದು ಪ್ರತೀತಿ. ಈ ತಿಂಗಳಲ್ಲಿ ಪ್ರತಿ ದಿನ ಸುಮಾರು ರಾತ್ರಿ ಎಂಟು ಗಂಟೆಯಿಂದ ಹತ್ತು ಗಂಟೆಯಿಂದ ತರಾವಿ ನಮಾಜ್ ಎಂಬ ವಿಶಿಷ್ಟ ಪ್ರಾರ್ಥನೆಯಿಂದ ಮುಸ್ಲಿಮರು ಮಾಡುತ್ತಾರೆ.

ರಂಜಾನಿನ ಉಪವಾಸ ಬಾಲಚಂದ್ರದರ್ಶನದೊಂದಿಗೆ ಪ್ರಾರಂಭವಾಗಿ ಇನ್ನೊಂದು ಬಾಲಚಂದ್ರದರ್ಶನವಾದ ಮೇಲೆ-ಅಂದರೆ 30 ದಿವಸಗಳಲ್ಲಿ ಮುಗಿಯುತ್ತದೆ. ಈ ಕಾರಣದಿಂದಾಗಿ ಕೆಲವು ವೇಳೆ ಹಬ್ಬದ ದಿವಸ 24 ಗಂಟೆ ಮುಂದಕ್ಕೆ ಹೋಗುತ್ತದೆ. ಬಾಲಚಂದ್ರದನ್ನು ಕಂಡ ಮಾರನೆಯ ದಿವಸ ಈ ಹಬ್ಬವನ್ನು ಆಚರಿಸಲಾಗುತ್ತದೆ. ಆ ದಿವಸ ಬೆಳಗ್ಗೆ ಸ್ನಾನವಾದ ಕೂಡಲೆ ಸದಖ ಅಥವಾ ದಾನ ಕೊಡಬೇಕೆಂಬ ನಿಯಮವಿದೆ. ಇದನ್ನು ಧಾನ್ಯ, ಬಟ್ಟೆ ಅಥವಾ ಹಣದ ರೂಪದಲ್ಲಿ ಬಡಬಗ್ಗರಿಗೂ ಫಕೀರರಿಗೂ ಕೊಡುತ್ತಾರೆ. ಅನಂತರ ಗಂಡಸರು ಮತ್ತು ಮಕ್ಕಳು ಈದ್‍ಗಾಹ್‍ಕ್ಕೆ (ಪ್ರಾರ್ಥನಾ ಸ್ಥಳ) ನಮಾಜು (ಪ್ರಾರ್ಥನೆ) ಮಾಡುವುದಕ್ಕಾಗಿ ಮಡಿಬಟ್ಟೆ ಧರಿಸಿ ಹೋಗುತ್ತಾರೆ. ಬೆಳಗ್ಗೆ ಸುಮಾರು ಹತ್ತು ಗಂಟೆಯ ಸಮಯಕ್ಕೆ ಸಾಮೂಹಿಕ ಪ್ರಾರ್ಥನೆ ನಡೆಯುತ್ತದೆ. ಪೇಷ್ ಇಮಾಮ್ ಅಥವಾ ಖಾಜೀ ಅರಬ್ಬೀ ಹಾಗೂ ಉರ್ದು ಭಾಷೆಗಳಲ್ಲಿ ಈ ಹಬ್ಬದ ಮಹತ್ತ್ವದ ಬಗ್ಗೆ ಉಪನ್ಯಾಸ ಮಾಡಿ ನೆರೆದ ಜನರಿಗೆ ಸದ್ಭೋಧನೆ ಮಾಡುತ್ತಾರೆ. ಇದಾದ ಅನಂತರ ಅಲ್ಲಿ ನೆರದ ಜನರು ಒಬ್ಬರನ್ನೊಬ್ಬರು ಅಲಿಂಗನ ಮಾಡಿಕೊಂಡು ಈದ್ ಮುಬಾರಕ್ ಎಂದು ಹೇಳಿ ಹಬ್ಬದ ಶುಭಾಶಯಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಬಡವ - ಬಲ್ಲಿದ, ಶತ್ರು - ಮಿತ್ರ, ಪರಿಚಿತ - ಅಪರಿಚಿತ ಎಂಬ ಯಾವ ಭೇದಭಾವವೂ ಇರುವುದಿಲ್ಲ. ಮುಸ್ಲಿಮರೆಲ್ಲ ಸಹೋದರರು. ಇಡೀ ಸಮಾಜ ಒಂದೇ ಅವಿಭಾಜ್ಯ ಅಂಗ ಎಂಬ ಭಾವನೆ ಎಲ್ಲರ ಮನಸ್ಸಿನಲ್ಲೂ ಉಂಟಾಗುವುದು. ಈ ಪ್ರಾಥನೆಯಿಂದ ಹಿಂತಿರುಗಿದ ಬಳಿಕ ಕಿರಿಯರು ಸಾಮಾನ್ಯವಾಗಿ ತಮ್ಮ ಅಜ್ಜ, ಅಜ್ಜಿ, ತಂದೆ, ಅಣ್ಣ, ಅಕ್ಕಂದಿರು ಮೊದಲಾದ ಹಿರಿಯರ ಬಳಿ ಹೋಗಿ ಅವರ ಪಾದಗಳನ್ನು ಮುಟ್ಟಿನಮಸ್ಕರಿಸುವುದು ಒಂದು ಸಂಪ್ರದಾಯ. ಆಗ ಹಿರಿಯರು ಅವರನ್ನು ಯಥೇಚ್ಛವಾಗಿ ಹರಸುತ್ತಾರೆ. ಈ ಹಬ್ಬದಲ್ಲಿ ಎಲ್ಲರಿಗೂ ಎಲ್ಲ ಮನೆಗಳಲ್ಲೂ ಆಮಂತ್ರಣ. ಸ್ವಲ್ಪವಾದರೂ ತಿನ್ನಬೇಕು. ಈಜಿಪ್ಟ್‍ನಂಥ ಕೆಲವು ದೇಶಗಳಲ್ಲಿ ರಂಜಾನ್ ಮತ್ತು ಬಕ್ರೀದ್‍ನ ದಿನ ಬಂಧುಗಳ ಗೋರಿಗಳ ಬಳಿ ಪ್ರಾರ್ಥನೆ ಮಾಡುವ ಪದ್ಧತಿ ಇದೆ. 
ದಾನ, ಧರ್ಮ, ಸಾಮೂಹಿಕ ಪ್ರಾರ್ಥನೆ, ಮೃಷ್ಟಾನ್ನ ಭೋಜನ- ಇವೇ ಈ ಹಬ್ಬದ ಮುಖ್ಯ ಕಾರ್ಯಕ್ರಮಗಳು.
(ಕೆ.ಎಮ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ